ಚೆಂಡುಮಲ್ಲಿಗೆ
 ಆಸ್ಟರೇಸೀ ಕುಟುಂಬಕ್ಕೆ ಸೇರಿದ ಒಂದು ಸುಪ್ರಸಿದ್ಧ ಏಕವಾರ್ಷಿಕ ಅಲಂಕಾರಸಸ್ಯ (ಮ್ಯಾರಿಗೋಲ್ಡ್). ಟೆಜೀಟಾಸ್ ಶಾಸ್ತ್ರೀಯ ಹೆಸರು. ಇದನ್ನು ಉದ್ಯಾನಗಳಲ್ಲಿ ಮಡಿಸಸ್ಯವಾಗಿ ಇಲ್ಲವೆ ಕುಂಡಸಸ್ಯವಗಿ ಬೆಳೆಸುತ್ತಾರೆ. ಇದರ ಕೆಲವು ಬಗೆಗೆಳ ಹೂಗಳನ್ನು ಹೂದಾನಿಗಳಲ್ಲಿಟ್ಟು ಗೃಹಾಲಂಕರಣಕ್ಕೆ ಬಳಸುವುದೂ ಉಂಟು. ಇದರಲ್ಲಿ ಫ್ರೆಂಚ್ ಮ್ಯಾರಿಗೋಲ್ಡ್ (ಪ್ಯಾಟುಲ) ಮತ್ತು ಆಫ್ರಿಕನ್ ಮ್ಯಾರಿಗೋಲ್ಡ್ (ಟೆ.ಎರಕ್ಟ) ಎಂಬ ಎರಡು ಮುಖ್ಯ ಬಗೆಗಳುಂಟು. ಇವುಗಳ ಬೆಳೆವಣಿಗೆಯ ಸ್ವಭಾವ ಹಾಗೂ ಹೂಗಳ ರಚನೆಯಲ್ಲಿ ವ್ಯತ್ಯಾಸಗಳಿವೆ. ಆಫ್ರಿಕನ್ ಬಗೆಯದು ದೃಢಕಾಯದ್ದಾಗಿದ್ದು 75 ಛಿm. ಎತ್ತರಕ್ಕೆ ಬೆಳೆಯುತ್ತದೆ. ಇದರ ಹೂಗಳು ಕಿತ್ತಳೆ ಅಥವಾ ಹಳದಿ ಬಣ್ಣದವು; ಹೂದಳಗಳು ಒಂಟಿ ಇಲ್ಲವೆ ಹಲವರು ಸುತ್ತುಗಳಲ್ಲಿವೆ. ಫ್ರೆಂಚ್ ಬಗೆಯ ಗಿಡ ಪುಟ್ಟಗಾತ್ರದ್ದು; 20-30 ಛಿm. ಎತ್ತರಕ್ಕೆ ಬೆಳೆಯುತ್ತದೆ. ಇದರ ಹೂಗಳ ಬಣ್ಣ ಹಳದಿ ಇಲ್ಲವೆ ಕೆಂಗಂದು ಮಿಶ್ರಿತ ಹಳದಿ. ಇವೆರಡು ಬಗೆಗಳಲ್ಲೂ ಹಲವಾರು ಸುಪ್ರಸಿದ್ಧ ತಳಿಗಳುಂಟು. ಎಲ್ಲ ತಳಿಗಳಲ್ಲೂ ಎಲೆಗಳು ಮಾತ್ರ ಒಂದೇ ಮಾದರಿಯವು; ಅವುಗಳ ಜೋಡಣೆ ಅಭಿಮುಖ ರೀತಿಯದು; ಎಲೆಯ ಪತ್ರಭಾಗ ಅನೇಕ ಭಾಗಗಳಾಗಿ ಸೀಳುಗೊಂಡಿದೆ, ಅಂಚು ಗರಗಸದಂತೆ, ಹೂಗೊಂಚಲು ಚೆಂಡುಮಂಜರಿ ಬಗೆಯದು. ಚೆಂಡುಮಲ್ಲಿಗೆಯ ಬಗೆಗಳನ್ನು ಸಾಮಾನ್ಯವಾಗಿ ಬೀಜ ಮತ್ತು ಕಾಂಡದ ತುಂಡುಗಳಿಂದ ವೃದ್ಧಿಸುವುದುಂಟು. ಎಲ್ಲ ತರದ ಮಣ್ಣು ಮತ್ತು ಹವಾಗುಣದಲ್ಲಿ ಇದನ್ನು ಬೆಳೆಸಬಹುದು. ಫಲವತ್ತಾದ ಮತ್ತು ಚೆನ್ನಾಗಿ ನೀರು ಬಸಿದುಹೋಗುವಂಥ ಮಣ್ಣು ಉತ್ತಮ. ಅತಿಚಳಿ ಹಾನಿಕರ. ಬೀಜಗಳನ್ನು ಫೆಬ್ರುವರಿ-ಜೂನ್ ತಿಂಗಳ ನಡುವಣ ಕಾಲದಲ್ಲಿ ಮಡಿಗಳಲ್ಲಾಗಲಿ, ಕುಂಡಗಳಲ್ಲಾಗಲಿ, ಪೆಟ್ಟಿಗೆಗಳಲ್ಲಾಗಲಿ ಬಿತ್ತಬಹುದು. ಬೆಟ್ಟಸೀಮೆಗಳಲ್ಲಿ ಮಾರ್ಚಿ-ಏಪ್ರಿಲ್ ತಿಂಗಳಲ್ಲಿ ಬಿತ್ತುವುದು ಉತ್ತಮ. ಬಿತ್ತಿದ ಬೀಜಗಳು 4-6 ದಿವಸಗಳಲ್ಲಿ ಮೊಳೆತು, ಒಂದು ತಿಂಗಳ ಅನಂತರ ನಾಟಿ ಮಾಡಲು ಸಿದ್ಧವಾಗುತ್ತವೆ. ಸಸಿಗಳು ಸುಮಾರು 66 ಛಿm. ಎತ್ತರ ಬೆಳೆದ ಮೇಲೆ ಬಿದಿರುಕಡ್ಡಿಯ ಆಧಾರವನ್ನು ಕೊಡುವುದು ಉತ್ತಮ. ಗಿಡ ಹುಲುಸಾಗಿ ಬೆಳೆಯುವಂತೆ ಮಾಡಲು ಮೊದಲು ಬಿಟ್ಟ ಕುಡಿಗಳನ್ನು ಚಿವುಟಿಹಾಕಬೇಕು. ಗಿಡಗಳಿಗೆ ಹೆಚ್ಚು ಗೊಬ್ಬರ ಹಾಕಬಾರದು. ಇಲ್ಲವಾದರೆ ಎಲೆಗಳೇ ಹೆಚ್ಚು ಬೆಳೆದು ಹೂಗಳು ಕಡಿಮೆಯಾಗುತ್ತವೆ.

	ಚೆಂಡುಮಲ್ಲಿಗೆಯಲ್ಲಿನ ಮುಖ್ಯ ತಳಿಗಳಿವು. 1 ಆಪ್ರಿಕನ್ ಬಗೆ : ಜಯಂಟ್ ಆರಿಂಜ್, ಗಿನಿಗೋಲ್ಡ್, ಪ್ರಿನ್ಸ್ ಆರಿಂಜ್, ಪ್ರಿಮ್‍ರೋಸ್ ಕ್ವೀನ್, ಸನ್ ಜಯಂಟ್, ಯೆಲೊ ಸುಪ್ರೀಮ್, ಕ್ರೌನ್ ಆಫ್ ಗೋಲ್ಡ್, ಗ್ಲಿಟರ್ಸ್, ಗೋಲ್ಡ್ ಸ್ಮಿತ್, ಕ್ಯೂಪಿಡ್, ಹ್ಯಾಪಿನೆಸ್, ಹವಾಯ್ ಇತ್ಯಾದಿ.

	2. ಫ್ರೆಂಚ್ ಬಗೆ : ಲೀಜನ್ ಆಫ್ ಆನರ್, ನಾಟಿ ಮೇರಿಯೆಟ, ಸ್ಟಾರ್ ಆಫ್ ಇಂಡಿಯ, ಯೆಲೊ ಕ್ರೌನ್, ಹಾರ್ಮನಿ, ಗೋಲ್ಡನ್ ಬಾಲ್, ರಸ್ಟಿ ರೆಡ್, ಫೈರ್‍ಗ್ಲೋ, ಬ್ರೌನಿ, ಜಿಪ್ಸಿ, ಸನ್‍ಕಿಸ್ಟ್ ಟಾಮ್‍ತಮ್ ಮುಂತಾದವು.
(ಎಂ.ಎಚ್.ಎಂ.; ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ